Basadi History

ಹದಿನಾಲ್ಕನೆಯ ಶತಮಾನದ ಆದಿಯಲ್ಲಿ ಕಳಸದ ರಾಜನಾಗಿದ್ದ ಲೋಕನಾಥ ದೇವರಸನೆಂಬ ಸಾಂತಾರ ವಂಶದ ರಾಜನು ಕಾರ್ಕಳದ ತುಂಡರಸನಾಗಿದ್ದ. ಕಾಬೆಟ್ಟು ಹೆಗ್ಗಡೆಯನ್ನು ನಿವಾರಿಸಿ ಕಾರ್ಕಳವನ್ನು ತನ್ನ ರಾಜಧಾನಿಯನ್ನಾಗಿ ಮಾಡಿ ಆಳತೊಡಗಿದನು. ಮುಂದೆ ಇವನ ವಂಶಜರು ಕ್ರಿ. ಶ. 1650ರ ವರೆಗೆ ಕಾರ್ಕಳವನ್ನು ಆಳಿದರು. ಇವರು ಭೈರರಸರೆಂದು ಪ್ರಸಿದ್ಧರಾದರು.

ಅವರ ಆಡಳಿತದಲ್ಲಿ ಕಾರ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಿತು. ಇವರ ಮುನ್ನೂರು ವರ್ಷಗಳ ಆಡಳಿತದ ಅವಧಿಯಲ್ಲಿ 2 ಚತುರ್ಮುಖ ಬಸದಿಗಳು, ಶ್ರಮಣ ಬಸದಿ, ಗೊಮ್ಮಟೇಶ್ವರ ಪ್ರತಿಮೆ, ಹಿರಿಯಂಗಡಿಯ ಮಾನಸ್ಥಂಭ, ಅನಂತಶಯನ ದೇವಸ್ಥಾನ, ರಾಮಸಮುದ್ರವೆಂಬ ಕೃತಕ ಸರೋವರ, ಈಗ ಆನೆಕೆರೆಯೆಂದು ಕರೆಯಲ್ಪಡುವ ಪದ್ಮಸರೋವರವೆಂಬ ಕೆರೆ ಮುಂತಾದವನ್ನು ಕಟ್ಟಿಸಿದರು.

ಆನೆಕೆರೆಯನ್ನು ಕೃತಕವಾಗಿ ನಿರ್ಮಿಸಲಾಗಿದ್ದು, ಮೊದಲು ಆ ಪ್ರದೇಶವು ಈಗ ಉದ್ಯಾವರ ನದಿಯೆಂದು ಕರೆಯುವ ಪಾಪನಾಶಿನಿ ನದಿಯ ಉಗಮ ಸ್ಥಾನವಾಗಿತ್ತು. ಅದಕ್ಕೆ ದಂಡೆಯನ್ನು ಕಟ್ಟಿ ಭೈರವರಸನೊಬ್ಬನು ಅದನ್ನು ಸಣ್ಣ ಸರೋವರವನ್ನಾಗಿ ಪರಿವರ್ತಿಸಿ ಪದ್ಮ ಸರೋವರವೆಂದು ಹೆಸರಿಸಿದನು, ಅದರಲ್ಲಿ ದಟ್ಟವಾಗಿ ತಾವರೆ ಹೂಗಳು ಬೆಳೆಯುತ್ತಿದ್ದವು. ಈಗಲೂ ತಾವರೆ ಹೂಗಳನ್ನು ಕಾಣಬಹುದು.

ಭೈರವರಸರ ವಂಶಸ್ಥ ಪಾಂಡ್ಯನಾಥ ಪಾಡ್ಯಪ್ಪೊಡೆಯರು ದಿನಾಂಕ 16-5-1545 ರಲ್ಲಿ ಈ ಕೆರೆಯ ಮಧ್ಯದಲ್ಲಿ ಸುಂದರವಾದ ಚತುರ್ಮುಖ ಬಸದಿಯನ್ನು ಪ್ರತಿಷ್ಠಾಪನೆಗೊಳಿಸಿದರು.

ಈ ಚತುರ್ಮುಖ ಕೆರೆ ಬಸದಿಯಲ್ಲಿ ಭ. ಆದಿನಾಥ ಸ್ವಾಮಿ, ಭ. ಶ್ರೀ ಚಂದ್ರನಾಥ ಸ್ವಾಮಿ, ಭ. ಶ್ರೀ ಶಾಂತಿನಾಥ ಸ್ವಾಮಿ, ಭ. ಶ್ರೀ ಮಹಾವೀರ ಸ್ವಾಮಿ ಅಂದಿನಿಂದಲೂ ಆರಾಧನೆಯಾಗುತ್ತಾ ಬರುತ್ತಿದ್ದಾರೆ. ಮೇಗಿನ ನೆಲೆಯಲ್ಲಿ ಭ. ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಹಾ ಮಾತೆ ಶ್ರೀ ಪದ್ಮಾವತಿ ದೇವಿ ಪೂರ್ವಾಭಿಮುಖವಾಗಿ ಪ್ರತಿಷ್ಠೆಗೊಂಡು ಪೂಜಿಸಲ್ಪಡುತ್ತಿದ್ದಾರೆ.